ನಾಚಿರಾಜ
ಸು 1300. ಜೈನಕವಿ. ಈತನ ಗ್ರಂಥ ನಾಚಿರಾಜೀಯ. ಅಮರಸಿಂಹನ ಅಮರಕೋಶಕ್ಕೆ ಕನ್ನಡದಲ್ಲಿ ಬರೆದ ವ್ಯಾಖ್ಯಾನವಿದು. ಈಗ ದೊರೆತಿರುವ ಕನ್ನಡ ವ್ಯಾಖ್ಯಾನಗಳಲ್ಲಿ ಈ ಗ್ರಂಥವೇ ಅತ್ಯಂತ ಪ್ರಾಚೀನವಾದುದು. ಅಷ್ಟೇ ಅಲ್ಲ; ಅಮರಕೋಶಕ್ಕೆ ಸಂಬಂಧಿಸಿದಂತೆ ಭಾರತೀಯ ಭಾಷೆಗಳಲ್ಲಿ ಬರೆದ ಪ್ರಥಮ ವ್ಯಾಖ್ಯಾನವಿದು. ಈತನ ವ್ಯಾಖ್ಯಾನ ಸರಳವಾಗಿದೆ. ಸಂಸ್ಕøತಕ್ಕೆ ಪ್ರತಿಯಾಗಿ ಕನ್ನಡ ಶಬ್ದಗಳನ್ನು ಬಳಸುವಲ್ಲಿ ಈತ ಸಾಕಷ್ಟು ಶ್ರಮಿಸಿದ್ದಾನೆ. ಗಿಡಮರಗಳ ಹೆಸರಿನ ಪಟ್ಟಿಯಲ್ಲಿ ಇದನ್ನು ಗುರುತಿಸಬಹುದು. ಕೆಲವು ಅನುಕ್ತ ಶಬ್ದಗಳು ಈತನ ವ್ಯಾಖ್ಯಾನದಲ್ಲುಂಟು. ಪ್ರಾಯಶಃ ಮೂಲ ಶಬ್ದಗಳೊಂದಿಗೆ ಕೆಲವನ್ನು ಹೊಸತಾಗಿ ಈತ ಸೇರಿಸಿರಬೇಕು. ಮೂಡಬಿದಿರೆಯಲ್ಲಿರುವ ಇದರ ಪ್ರತಿಗಳಿಂದ ಧನಂಜಯ, ರಭಸ ಇವರುಗಳು ಗ್ರಂಥಗಳನ್ನೂ ನಾಚಿರಾಜ ಉಪಯೋಗಿಸಿದಂತೆ ತಿಳಿದುಬರುತ್ತದೆ.		
		(ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ